ತ್ರಿಶ್ಶೂರ್, ಮಧ್ಯ-ಪ್ರಾಚ್ಯದಲ್ಲಿ ಕ್ರೈಸ್ತರ ಸಂಖ್ಯೆ ಕುಸಿಯುತ್ತಿರುವುದು ಮಹಾನ್ ವಿಪತ್ತು ಎಂದು ಧರ್ಮಶಾಸ್ತ್ರಜ್ಞ ಡಾ. ಹಾರ್ಮನ್ ಟ್ಯುಲೆ ಹೇಳಿದ್ದಾರೆ. ಜನಾಂಗ ವಿಕಾಸ, ಸರ್ವಾಧಿಕಾರತ್ವ ಮತ್ತು ರಾಜಕೀಯ ಅಸ್ಥಿರತೆ ಇದಕ್ಕೆ ಕಾರಣೀಭೂತವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯ-ಪ್ರಾಚ್ಯದಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೆ ಅಲ್ಲಿ ವಾಸ್ತವ್ಯ ಮುಂದುವರಿಸಲು ಆಸಕ್ತಿಯೇ ಇಲ್ಲ. ಹಾಗಂತ ಮಧ್ಯ-ಪ್ರಾಚ್ಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಜನಾಂಗ ವಿಕಾಸ, ಸರ್ವಾಧಿಕಾರತ್ವ ಮತ್ತು ರಾಜಕೀಯ ಅಸ್ಥಿರತೆ ಇದಕ್ಕೆ ಕಾರಣೀಭೂತವಾಗಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಬೆಲ್ಜಿಯಂನ ಲ್ಯುವೆನ್ ಕ್ಯಾಥೊಲಿಕ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಟ್ಯುಲೆ ಅವರು 'ಮಧ್ಯ-ಪ್ರಾಚ್ಯದಲ್ಲಿ ಇಸ್ಲಾಂ ಜತೆಗೆ ಕ್ರೈಸ್ತರ ಹೊಂದಾಣಿಕೆ' ಎಂಬ ವಿಷಯದ ಕುರಿತಾದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಅವರು ಸೋಮವಾರ ಮಾತನಾಡುತ್ತಿದ್ದರು.
ಮಧ್ಯ-ಪ್ರಾಚ್ಯದಲ್ಲಿ ವಾಸಿಸುತ್ತಿರುವ ಕ್ರೈಸ್ತರು ಗುಳೆ ಎದ್ದುಹೋಗುತ್ತಿದ್ದಾರೆ. ವಲಸೆ ಹೋಗುವುದೂ ಅವರಿಗೆ ಅನಾದಿ ಕಾಲದಿಂದಲೂ ಆಪ್ಯಾಯಮಾನವೇ. ಯುರೋಪ್ ಮತ್ತು ಅಮೆರಿಕದತ್ತ ಅವರು ಸದಾ ಮುಖ ಮಾಡಿತ್ತಾರೆ. ಏಕೆಂದರೆ ಆ ಭಾಗದಲ್ಲಿ ಅವರ ಕುಟುಂಬಸ್ಥರೋ, ಪರಿಚಯಸ್ಥರೋ ಯಾರೋ ಒಬ್ಬರು ಅಲ್ಲಿ ನೆಲೆಸಿರುತ್ತಾರೆ.
ಹಾಗಾಗಿ ಅವರು ಸುಲಭವಾಗಿ ಅಲ್ಲಿಗೆ ಸೇರಿಕೊಳ್ಳುತ್ತಾರೆ. ಆದರೆ ಮುಸ್ಲಿಮರಿಗೂ ಅಂತಹ ಆಸೆಯಿದ್ದರೂ ಅವರು ಹೊಸಬರಾಗಿರುವುದರಿಂದ ಯುರೋಪ್ ಮತ್ತು ಅಮೆರಿಕದತ್ತ ವಲಸೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಟ್ಯುಲೆ ಹೇಳಿದ್ದಾರೆ.
'ಮಧ್ಯ ಪ್ರಾಚ್ಯದಲ್ಲಿ ಸಾಮಾನ್ಯವಾಗಿ ಮುಸ್ಲಿಮರು ಚರ್ಚು ಅಥವಾ ಕ್ರೈಸ್ತ-ವಿರೋಧಿಗಳಲ್ಲ. ಆದರೆ ಅಪರಾಧಿಗಳು, ಸಮಾಜಘಾತುಕ ಶಕ್ತಿಗಳು ತಮ್ಮನ್ನು ಸರಕಾರಿ ಪ್ರಾಯೋಜಕರು ಎಂದುಬಿಂಬಿಸಿಕೊಂಡು ಕೃತ್ರಿಮ ಜನಾಂಗೀಯ ಕಲಹದಲ್ಲಿ ಭಾಗಿಯಾಗುತ್ತಿವೆ. ಆದ್ದರಿಂದ ಮಧ್ಯ ಪ್ರಾಚ್ಯದಲ್ಲಿನ ಬಹುಸಂಖ್ಯಾತ ಮುಸ್ಲಿಮರು ಕ್ರೈಸ್ತ-ವಿರೋಧಿಗಳು ಎಂದು ಜರಿಯುವುದು ಸರ್ವತಾ ಸಾಧುವಲ್ಲ' ಎಂದು ವಸ್ತುಸ್ಥಿತಿಯನ್ನು ಬಿಡಿಸಿಟ್ಟರು.
ಮಧ್ಯ ಪ್ರಾಚ್ಯದಲ್ಲಿನ ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಸಾಮರಸ್ಯ ಮೂಡಿಸಲು ಪೋಪ್ ಬೆನಿಡಿಕ್ಟ್ XVI ಅವರು ಮುಂದಿನ ತಿಂಗಳು ಲೆಬನಾನಿಗೆ ಭೇಟಿ ನೀಡುತ್ತಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಕ್ರೈಸ್ತರು ಶಾಂತಿ-ನೆಮ್ಮದಿಯನ್ನು ಬದುಕಬಹುದು ಎಂಬುದನ್ನು ಸಾದರಪಡಿಸುವ ನಿಟ್ಟಿನಲ್ಲಿ ಪೋಪ್ ಬೆನಿಡಿಕ್ಟ್ ಭೇಟಿ ಮಹತ್ವದ ಪಾತ್ರವಹಿಸಲಿದೆ ಎಂದು ಅವರು ಆಶಿಸಿದರು.
ಆದರೆ ಈಗಾಗಲೇ ಕೆಲವರು ಹೇಳುತ್ತಿರುವಂತೆ ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ The Crusade ಮಾದರಿಯಲ್ಲಿ ಕಲಹ ತಲೆದೋರಲಿದೆ ಎಂಬುದನ್ನು ಅವರು ಬಲವಾಗಿ ಅಲ್ಲಗಳೆದರು.